ಕ್ಲಾಬೂಂಟ್
1891-1928. ಜರ್ಮನ್ ಅಭಿವ್ಯಕ್ತವಾದಿ ಕವಿ, ಕಾದಂಬರಿಕಾರ, ಮತ್ತು ನಾಟಕಕಾರ. ಈತನ ನಿಜನಾಮಧೇಯ ಆಲ್‍ಫ್ರ್ಯಾಟ್ ಹೆನ್ಷೆಕ್. ಓಡರ್ ಪ್ರಾಂತ್ಯದ ಕ್ರಾಸೆನ್‍ನಲ್ಲಿ ಹುಟ್ಟಿದ. ಈತನ ಅನೇಕ ಭಾವಗೀತೆಗಳು ಮೊದಲಿಗೆ ಪ್ಯಾನ್ ಪತ್ರಿಕೆಯಲ್ಲಿ ಪ್ರಕಟಗೊಂಡುವು. ಟೊಟಿನ್‍ಕ್ಲಾಗೆ ಎಂಬ ಪುಸ್ತಕದಲ್ಲಿರುವ ಅನೇಕ ಕವನಗಳು ಈತನ ಹೆಂಡತಿಯ ಜ್ಞಾಪಕಾರ್ಥವಾಗಿ ಬರೆದವು. ಈತನ ನಾಟಕ ಕ್ರೈಡೆಕ್ರೀಸ್(1924); ಇದರ ಇಂಗ್ಲಿಷ್ ಭಾಷಾಂತರ ಸರ್ಕಲ್ ಆಫ್ ಜಾಕ್ (19290 ಜನಪ್ರಿಯ ಕೃತಿ. ಮಹಮದ್ ಮತ್ತು ಪೀಟರ್ ಎಂಬ ಎರಡು ಚಾರಿತ್ರಿಕ ಕಾದಂಬರಿಗಳನ್ನು ಈತ ರಚಿಸಿದ್ದಾನೆ. ಈತನ ಅನೇಕ ನೀಳ್ಗತೆಗಳು ಇಂಗ್ಲಿಷ್‍ಗೆ ಭಾಷಾಂತರಗೊಂಡಿವೆ. ಅವುಗಳಲ್ಲಿ ಬ್ರ್ಯಾಕೀ ದಿ ಫೂಲ್ (1929); ಪೀಟರ್ ದಿ ಜಾರ್(1925); ದಿ ಇನ್‍ಕ್ರೆಡಿಬಲ್ ಬೊರ್ಜೀಯಾಸ್ (1929)-ಮುಖ್ಯವಾದವು. ಅಲ್ಲದೆ ಈತ ಜರ್ಮನ್ ಸಾಹಿತ್ಯ ಚರಿತ್ರೆಯೊಂದನ್ನು ಬರೆದಿದ್ದಾನೆ.			(ಟಿ.ವಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ